ಇತಿಹಾಸ ದರ್ಶನ

ಇತಿಹಾಸ ದರ್ಶನವೆಂಬ ಮಾತನ್ನು 18ನೆಯ ಶತಮಾನದಲ್ಲಿ ಫ್ರೆಂಚ್ ಲೇಖಕನಾದ ವಾಲ್ಟೇರ್ ಬಳಕೆಗೆ ತಂದ. ವಿಮರ್ಶಾತ್ಮಕವಾದ ಇತಿಹಾಸ ವಿವರಣೆಯೇ ಇತಿಹಾಸ ದರ್ಶನ ಎಂಬುದಾಗಿ ಆತ ಭಾವಿಸಿದ್ದ. ಬರೀ ಘಟನೆಗಳ ವಿವರಣೆಯೇ ಇತಿಹಾಸವಾಗಲಾರದು. ಇತಿಹಾಸದ ಘಟನೆಗಳನ್ನು ವಿಮರ್ಶಾತ್ಮಕವಾಗಿ ತುಲನೆ ಮಾಡುವ, ಕಾರಣಗಳನ್ನು ಗುರುತಿಸುವ ದೃಷ್ಟಿಯೇ ಇತಿಹಾಸ ದರ್ಶನ ಎಂಬುದಾಗಿ ವಾಲ್ಟೇರ್ ಹೇಳಿದ. ಬಹಳ ಕಾಲದವರೆಗೆ ಇತಿಹಾಸಕಾರರು ಘಟನೆಗಳನ್ನು ವಿವರಿಸುವುದರಲ್ಲೇ ತೃಪ್ತರಾಗಿ, ಅವುಗಳಿಗೆ ಕಾರಣಗಳನ್ನು ಹುಡುಕುವುದರಲ್ಲಿ ನಿರಾಸಕ್ತರಾಗಿದ್ದರು. ಹೆಗೆಲನ ಪ್ರಕಾರ ಪ್ರಪಂಚದ ಅಥವಾ ಸಮಗ್ರ ಮಾನವಕುಲದ ಇತಿಹಾಸವೇ ಇತಿಹಾಸ ದರ್ಶನ. 19ನೆಯ ಶತಮಾನದ ದೃಷ್ಟ ಪ್ರಮಾಣವಾದಿಗಳು (ಪಾಸಿಟಿವಿಸ್ಟ್ಸ್) ಇದಕ್ಕೆ ಬೇರೊಂದು ಅರ್ಥ ಕೊಟ್ಟರು. ಅವರ ಪ್ರಕಾರ ಘಟನೆಗಳ ಹಿಂದೆ ತೋರುವ ನಿಯಮಗಳನ್ನು ಕಂಡುಹಿಡಿಯುವುದೇ ಇತಿಹಾಸ ದರ್ಶನ. ದೃಷ್ಟ ಪ್ರಮಾಣವಾದಿಗಳಿಗೆ ಇತಿಹಾಸ ಎಂಬುದು ಒಂದು ಸ್ವಯಂದರ್ಶನಶಾಸ್ತ್ರವಾಗಿ, ಅವರು ಸಮಗ್ರ ಇತಿಹಾಸದಲ್ಲಿ ಸಾಮಾನ್ಯವಾದ ನಿಯಮಗಳನ್ನು ಗುರುತಿಸುವುದರಲ್ಲಿ ನಿರತರಾದರು. ಇಂಥ ಇತಿಹಾಸದ ಅಭ್ಯಾಸವನ್ನು ಸಾಮಾಜಿಕ ಭೌತಶಾಸ್ತ್ರವೆಂದು ಕರೆದರು. 19ನೆಯ ಶತಮಾನದ ರಮ್ಯತಾವಾದಿಗಳು (ರೊಮಾಂಟಿಸಿಸ್ಟ್ಸೊ) ಇತಿಹಾಸದಲ್ಲಿ ವ್ಯಕ್ತಿಗಳ ಪ್ರಭಾವವೇ ಮುಖ್ಯವೆಂಬ ಅಂಶವನ್ನು ಒತ್ತಿ ಹೇಳಿದರು. ಕಾರ್ಲೈಲ್ ಪ್ರತಿಪಾದಿಸಿದ ಮಹಾಪುರುಷ ಸಿದ್ಧಾಂತದ ಪ್ರಕಾರ ಪ್ರಸಿದ್ಧ ವ್ಯಕ್ತಿಗಳು ಇತಿಹಾಸದ ವಿವರಣೆಯಲ್ಲಿ ಕೇಂದ್ರಪ್ರಾಯರು. ಇದೇ ಇತಿಹಾಸ ದರ್ಶನವೆಂದು ಪ್ರಣೀತವಾಯಿತು. ಆದರೆ ಈ ಸಿದ್ಧಾಂತದಿಂದ ಇತಿಹಾಸವನ್ನು ಸಮಗ್ರವಾಗಿ ವಿವರಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಗತಕಾಲದ ಘಟನೆಗಳು ಒಂದು ಸಮಗ್ರ ಜನತೆಯ ಪ್ರಭಾವದಿಂದ ಉತ್ಪನ್ನವಾದ ಕಾರಣ, ಒಬ್ಬ ವ್ಯಕ್ತಿಯನ್ನು ಕೇಂದ್ರವನ್ನಾಗಿ ಮಾಡುವುದು ಅಷ್ಟಾಗಿ ಸರಿಯಾಗಲಾರದು. ಅದೇ ರೀತಿ, ಆದರ್ಶಗಳೂ ಭಾವನೆಗಳೂ ಇತಿಹಾಸದ ಘಟನೆಗಳಿಗೆ ಕಾರಣವೆಂಬ ಹೆಗೆಲನ ವಾದವೂ ಸಹಜತೆಗೆ ದೂರವಾದದ್ದು. ಏಕೆಂದರೆ ಆದರ್ಶಗಳು ಸಾಧಿಸಬೇಕಾದ ಗುರಿಯನ್ನು ಸೂಚಿಸುತ್ತವೆ ಮಾತ್ರ. ಮಾನವ ಈ ಬಗ್ಗೆ ಅಷ್ಟಾಗಿ ಚಿಂತಿಸಿ, ವಿವೇಚಿಸಿ ಮುಂದುವರಿದಿದ್ದಾನೆ ಎಂದು ಹೇಳಲಾಗದು. ಮತೀಯ ಭಾವನೆಗಳು ಮಾನವನ ಉನ್ನತಿಯನ್ನು ಸೂಚಿಸುವ ಹೆಗ್ಗುರುತುಗಳಾಗಿವೆ ಮತ್ತು ಒಂದೊಂದು ಮತದ ಆದರ್ಶಗಳೇ ಆಯಾ ಗುಂಪಿನ ಇತಿಹಾಸವನ್ನು ವಿವರಿಸುವುದರಲ್ಲಿ ಸಹಾಯಕವಾಗುತ್ತದೆ ಎಂದು ಹೆಗೆಲ್ ವಾದಿಸಿದ. ಉದಾಹರಣೆಗೆ, ಚೀನಿಯರ ಇತಿಹಾಸ ಕನ್‍ಫ್ಯೂಷಿಯಸ್ಸನ ಆದರ್ಶಗಳ ಪ್ರಭಾವಗಳಿಂದ ಉಂಟಾಯಿತು; ಪ್ರೇಮ, ಅನುಕಂಪಗಳುಳ್ಳ ಬೌದ್ಧಮತ, ಪರಮತ ಸಹಿಷ್ಣುತೆ ಮತ್ತು ಉದಾರತ್ವಗಳನ್ನು ಕೇಂದ್ರವಾಗಿ ಉಳ್ಳ ಹಿಂದೂಮತ, ನ್ಯಾಯ ಮತ್ತು ಸಮಾನತೆಗಳನ್ನು ಆದರ್ಶಗಳಾಗಿ ಉಳ್ಳ ಇಸ್ಲಾಂ ಧರ್ಮ-ಇವುಗಳ ಆದರ್ಶಗಳು ಆಯಾ ಪಂಗಡದವರ ಇತಿಹಾಸವನ್ನು ರೂಪಿಸುವ ಶಕ್ತಿಗಳಾದವು ಎಂದು ಹೆಗೆಲ್ ಅಭಿಪ್ರಾಯಪಟ್ಟ. ಎಲ್ಲಿಯವರೆಗೆ ಈ ಮತೀಯ ಆದರ್ಶಗಳು ಸದ್ಭಾವನೆಗಳನ್ನು ಬೆಳೆಸುವುದಕ್ಕೂ ಮಾನವನ ಪ್ರಗತಿಯನ್ನು ಬೆಳೆಸುವುದಕ್ಕೂ ಸಹಕಾರಿಯಾಗಿದ್ದುವೋ ಅಲ್ಲಿಯವರೆಗೆ ಅವುಗಳ ಪಾತ್ರ ಹಿರಿದಾಗಿದ್ದುದೇನೋ ಸರಿ. ಆದರೆ ಎಂದು ಅಂಥ ಆದರ್ಶಗಳಿಂದ ಮಾನವ ದೂರನಾದನೋ ಅಂದಿನಿಂದ ಅವುಗಳ ಪ್ರಭಾವ ಇತಿಹಾಸದ ಘಟನೆಗಳ ಮೇಲೆ ಅಷ್ಟಾಗಿ ಆಗಲಿಲ್ಲವೆನ್ನಬಹುದು. ಹೆಗೆಲನ ಅನುಯಾಯಿಯಾದ ರಾಂಕ ಪರಮಾತ್ಮನೆ ಇತಿಹಾಸ ಘಟನಾವಳಿಗಳ ಸೂತ್ರಧಾರನೆಂದು ನಂಬಿದ್ದ. ಇತಿಹಾಸದ ಘಟನೆಗಳಿಗೆ ಕಾರಣಗಳಾದ ಭಾವನೆಗಳು ಆ ಪರಮಾತ್ಮನಿಂದ ನಿರ್ದೇಶಿಸಲ್ಪಟ್ಟವೆಂಬುದು ರಾಂಕನ ಮತವಾಗಿತ್ತು. ಒಟ್ಟಿನಲ್ಲಿ ಹೆಗೆಲ್ ಮತ್ತು ರಾಂಕ ಆಧ್ಯಾತ್ಮಿಕ ಭಾವನೆಗಳಿಗೆ ಪ್ರಾಮುಖ್ಯ ಕೊಟ್ಟರು.

	ಥಾಮಸ್ ಬಕಲ್ ಮತ್ತು ಕಾರ್ಲ್‍ಮಾಕ್ರ್ಸ್ ಇದಕ್ಕೆ ವಿರುದ್ಧವಾಗಿ ಭೌತಿಕ ಅಂಶಗಳು ಇತಿಹಾಸ ಘಟನೆಗಳ ಮೇಲೆ ಬೀರುವ ಪ್ರಭಾವವನ್ನು ಒತ್ತಿ ಹೇಳಿದರು. ಭೌತ ಪ್ರಪಂಚದ ಪ್ರಭಾವ, ಒಂದು ದೇಶದ ವಾಯುಗುಣ, ಭೂಗುಣ, ಅಲ್ಲಿಯ ಆಹಾರಪದ್ಧತಿ, ವಸತಿ ಮತ್ತು ಉಡುಪುಗಳು ಅಲ್ಲಿಯ ಸಮಾಜದ ಮೇಲೆ ಬೀರುವ ಪ್ರಭಾವವನ್ನು ಮೊತ್ತಮೊದಲ ಬಾರಿಗೆ ತೋರಿಸಿಕೊಟ್ಟವ. ಥಾಮಸ್ ಬಕಲ್. ಕಾರ್ಲ್‍ಮಾಕ್ರ್ಸ ಇನ್ನೂ ಮುಂದೆ ಹೋದ. ಆತ ಸಮಗ್ರ ಇತಿಹಾಸವನ್ನು ಭೌತಿಕತತ್ತ್ವಗಳ ಮೂಲಕ ವಿಮರ್ಶಿಸಿದ. ಸಮಾಜದಲ್ಲಿ ಶ್ರೀಮಂತರಿಗೂ ಬಡವರಿಗೂ ಮಧ್ಯೆ ಸತತವಾದ ವರ್ಗಕಲಹ ನಡೆಯುತ್ತಿದೆಯೆಂಬುದು ಆತನ ಮೊದಲನೆಯ ಸೂತ್ರ. ಭೌತ ಪ್ರಪಂಚವನ್ನು ಗೆಲ್ಲಲು ಮಾನವ ನಡೆಸುತ್ತಿರುವ ಹೋರಾಟವೇ ನಿಜವಾದ ಇತಿಹಾಸ ದರ್ಶನವೆಂಬುದು ಎರಡನೆಯದು. ಮೂರನೆಯದಾಗಿ, ಮೌಲ್ಯವೆಂದರೆ ಶ್ರಮವಲ್ಲದೆ ಮತ್ತೇನೂ ಅಲ್ಲ. ಕೊನೆಯದಾಗಿ, ಈಗಿನ ಸರ್ಕಾರರಚನೆಯನ್ನು ಉರುಳಿಸಿ, ಸಮತಾವಾದದ ಆದರ್ಶಗಳೇ ಪ್ರಮುಖ್ಯವಾಗಿ ಉಳ್ಳ ಸಮಾಜ ರಚಿಸುವ ದಿಶೆಯಲ್ಲಿ ಮಾನವ ಸಾಗುತ್ತಿದ್ದಾನೆ. ಒಟ್ಟಿನಲ್ಲಿ ಸಮಾಜವಿಕಾಸದಲ್ಲಿ ಆರ್ಥಿಕ ಅಂಶಗಳ ಪ್ರಭಾವವನ್ನು ಗುರುತಿಸಲು ಮಾಕ್ರ್ಸ್ ಪ್ರಯತ್ನಿಸಿದ್ದಾನೆ. ಮಾನವನ ಇರವೆಲ್ಲ ಬರೀ ಐಹಿಕವಸ್ತು ಸಂಗ್ರಹವನ್ನೇ ಅವಲಂಬಿಸಿದೆಯೆಂಬುದೇ ಈ ವಾದದ ಅತಿಶಯೋಕ್ತಿಯೆನ್ನಬಹುದು. 

	ಈ ತತ್ತ್ವಜ್ಞಾನಿಗಳು ತಮ್ಮ ತಮ್ಮ ಭಾವನೆಗಳ ಮೂಲಕ, ದರ್ಶನಗಳ ಮೂಲಕ ಇತಿಹಾಸ ಘಟನಾವಳಿಗಳನ್ನು ಅಭ್ಯಾಸ ನಡೆಸುವುದರಲ್ಲಿ ನಿರತರಾಗಿ, ಅಂಥ ಘಟನೆಗಳಿಗೆ ಇದ್ದಿರಬಹುದಾದ ಕಾರಣಗಳನ್ನೂ ಪ್ರೇರಕಶಕ್ತಿಗಳನ್ನೂ ಹೊರತೆಗೆಯಲು ಪ್ರಯತ್ನಿಸಿದರು. ಇಂಥ ಜ್ಞಾನಿಗಳು ಹುಟ್ಟುವುದಕ್ಕೆ ಬಹಳ ಮುಂಚೆ ಗ್ರೀಕರು ಇತಿಹಾಸವನ್ನು ವಿಮರ್ಶಾತ್ಮಕವಾಗಿ ಅಭ್ಯಾಸ ಮಾಡುವ ಪ್ರಯತ್ನದ ಬಗ್ಗೆ ನಂಬಿಕೆ ಇರಿಸಿಕೊಂಡಿದ್ದ, ನ್ಯಾಯವೇ ಉಪಯುಕ್ತತೆಗಿಂತ ಉತ್ತಮ; ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತವಾದ ಮೇಲೆ ಒಳ್ಳೆಯದಾಗುವುದು ಖಂಡಿತ; ಭಗವಂತ ಸತ್ಯವನ್ನು ಕಾಪಾಡುತ್ತಾನೆ; ಕೀರ್ತಿಯ ವ್ಯಾಮೋಹ ಅನೇಕ ವೇಳೆ ನಾಶಕ್ಕೆ ಕಾರಣವಾಗುತ್ತದೆ; ರಾಜಕೀಯ ಅನ್ಯಾಯ ಹಿಂಸೆಗಿಂತ ಕ್ರೂರವಾದದ್ದು; ಗುಪ್ತಮಾರ್ಗದಿಂದ ದ್ವೇಷ ಸಾಧಿಸಲು ಹೋದರೆ ಅದು ಫಲಿಸುವುದಿಲ್ಲ-ಇವೇ ಮುಂತಾದ ಪಾಂಡಿತ್ಯಪೂರ್ಣ ಅಭಿಪ್ರಾಯಗಳನ್ನು ಇತಿಹಾಸಾಭ್ಯಾಸದಿಂದ ಥ್ಯೂಸಿಡಿಡಿಸ್ ಸೂಚಿಸಿದ. ಕ್ರೈಸ್ತಮತೀಯ ಇತಿಹಾಸಕಾರನಾದ ಅಗಸ್ಟೈನ್ (354-430) ಇತಿಹಾಸವನ್ನು ರೂಪಿಸುವ ಶಕ್ತಿ ಮಾನವನ ಕೈಯಲ್ಲಿ ಇಲ್ಲವೆಂದೂ ಭಗವಂತನೇ ಸೂತ್ರಧಾರಿಯಾಗಿ ಮಾನವರನ್ನು ತನ್ನ ಕೈಗೊಂಬೆಗಳಂತೆ ಆಡಿಸುತ್ತಾನೆಂದೂ ಮತ್ತು ಆ ಪರಮಾತ್ಮ ರೂಪಿಸುವ ಮಾರ್ಗಗಳು ಆಶ್ಚರ್ಯದಾಯಕವಾಗಿಯೂ ಶಕ್ತಿಯುತವಾಗಿಯೂ ಇರುವುದೆಂದೂ ಅಭಿಪ್ರಾಯಪಟ್ಟ. ಪರಮಾತ್ಮನ ಪಟ್ಟಣವೆಂಬ ಭಾವನೆಯನ್ನು ಈತ ನಮಗೆ ತೋರಿಸಿಕೊಟ್ಟಿದಲ್ಲದೆ, ಮಾನವನ ಕಾರ್ಯಗಳನ್ನು ಲಘುವಾಗಿ ನೋಡುವುದಾಗಲಿ, ದುಃಖಿಸುವುದಾಗಲಿ ಸರಿಯಾದ ಮಾರ್ಗವಲ್ಲವೆಂದೂ ಅವುಗಳನ್ನು ಅರಿತುಕೊಳ್ಳುವುದೇ ಮುಖ್ಯವೆಂದೂ ನಂಬಿದ್ದ. ಪರಮಾತ್ಮ ಮಾನವನನ್ನು ಆಳುತ್ತಾನೆ; ಸರ್ಕಾರ ಮಾನವ ರಚಿತವಾದ್ದರಿಂದ ಪರಿಪೂರ್ಣವಾಗಿಲ್ಲ; ಅದರಿಂದ ಕೆಡುಕೇ ಹೆಚ್ಚು. ಆದರೆ ಪರಮಾತ್ಮನ ಪಟ್ಟಣ ಕ್ರೈಸ್ತ ಮತದ ಸಾಮ್ರಾಜ್ಯ ಮತ್ತು ಅದು ಭೂಮಿಯ ಮೇಲೆ ದೈವೀರಾಜ್ಯದ ಪ್ರತಿ ಎಂಬ-ಎಂಬುದು ಆತನ ಅಭಿಪ್ರಾಯ.

	ಆದ್ದರಿಂದ ಇತಿಹಾಸದರ್ಶನವೆಂದರೆ ಮಾನವನ ಗತಕಾಲದ ಚಟುವಟಿಕೆಗಳನ್ನು ಸಮಗ್ರವಾಗಿ ನೋಡಿ ಅವುಗಳನ್ನು ಸಕಾರಣವಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನವೇ ಆಗಿದೆ. ಕಾರ್ಯ-ಕಾರಣಗಳನ್ನು ಹೊಂದಿಸುವುದು ಇತಿಹಾಸದಲ್ಲಿ ಅತ್ಯಂತ ಕಠಿಣದ ಕೆಲಸವೇ ಸರಿ. ಇಂಥ ದರ್ಶನ ಲಭ್ಯವಾಗಬೇಕಾದರೆ ಇತಿಹಾಸವನ್ನು ಅಭ್ಯಾಸ ಮಾಡುವವನಿಗೆ ವೈಜ್ಞಾನಿಕ ದೃಷ್ಟಿ ಅತ್ಯಗತ್ಯ. ಇತಿಹಾಸದಲ್ಲಿ ಕಾರಣತ್ವ ಮೂರು ಅಂಶಗಳನ್ನೊಳಗೊಂಡಿದೆ. 1 ಆಕಸ್ಮಿಕ, 2 ದಾಖಲೆಯ ಅವಶ್ಯಕತೆ. 3. ತರ್ಕ, ಆಕಸ್ಮಿಕವಾಗಿ ಸಂಭವಿಸುವ ಘಟನೆಗಳನ್ನು ಮನುಷ್ಯನ ದೃಷ್ಟಿಕೋನದಿಂದ ಮೊದಲೇ ಊಹಿಸುವುದು ಸಾಧ್ಯವಿಲ್ಲ. ಇವು ವ್ಯಕ್ತಿಯ ಸಹಜವಲ್ಲದ ನಡೆವಳಿಕೆಗಳಿಂದ ಸಂಭವಿಸಿ ಇತಿಹಾಸದ ಮೇಲೆ ಪ್ರಭಾವ ಬೀರಬಹುದು. ಇಂಥವುಗಳನ್ನು ಯಾವ ತತ್ತ್ವದ ಆಧಾರದ ಮೇಲೂ ಟೀಕಿಸಲೂ ಕಷ್ಟವಾದೀತು. ಆದಾಗ್ಯೂ ಆಕಸ್ಮಿಕಗಳು ಇತಿಹಾಸದಲ್ಲಿ ಪ್ರಮುಖಪಾತ್ರ ವಹಿಸುತ್ತವೆ ಎಂಬ ಅಂಶವನ್ನು ಒಪ್ಪಿಕೊಳ್ಳಲೇಬೇಕು. ಉದಾಹರಣೆಗೆ, ಇಂಗ್ಲೆಂಡಿನ ರಾಣಿ ಮೊದಲನೆಯ ಎಲಿಜಿóಬತ್ ಲಂಡನ್ನಿನ ಕೆಲವೇ ವ್ಯಾಪಾರಿಗಳಿಗೆ ಈಸ್ಟ್ ಇಂಡಿಯ ಕಂಪನಿ ಸ್ಧಾಪಿಸಿ ವ್ಯಾಪಾರ ಮಾಡಲು ಅನುಮತಿ ಕೊಟ್ಟದ್ದು ಕಾಲಕ್ರಮೇಣ ಆ ಕಂಪನಿ ಒಂದು ದೊಡ್ಡ ಸಾಮ್ರಾಜ್ಯವನ್ನೇ ಸ್ಧಾಪಿಸಲು ಸಹಾಯವಾಯಿತೆಂಬ ಅಂಶವನ್ನು ಇತಿಹಾಸದ ಇಂಥ ಆಕಸ್ಮಿಕಗಳಲ್ಲಿ ಒಂದಾಗಿ ಸೇರಿಸಬಹುದು. ಕಾರ್ಯಕಾರಣಗಳ ಮೇಲೆ ಆಕಸ್ಮಿಕಗಳಿಂದ ಉಂಟಾಗುವ ಪ್ರಭಾವವನ್ನು ಟೀಕಿಸಲು ಕೆಲವು ತತ್ತ್ವಜ್ಞಾನಿಗಳು ವೇದಾಂತದ ಮೊರೆಹೊಕ್ಕರು. ಅವರ ಪ್ರಕಾರ ಘಟನೆಗಳನ್ನು ರೂಪಿಸುವ ದಿಶೆಯಲ್ಲಿ ಮಾನವನ ಕೈವಾಡವೇನೂ ಇಲ್ಲ; ಎಲ್ಲ ಘಟನೆಗಳು ಮತ್ತು ಅವುಗಳ ಉತ್ಪತ್ತಿ ಭಗವಂತ ಪ್ರೇರಣೆಯಿಂದಾದ್ದು ಎಂಬ ಅಭಿಪ್ರಾಯವೇ ಆಗಿ ಇದೇ ಕ್ರೈಸ್ತಮಠಾಧಿಪತಿಗಳು ನಂಬಿದ್ದ, ಆಗಸ್ಟೀನ್ ಪ್ರತಿಪಾದಿಸಿದ ಇತಿಹಾಸದರ್ಶನವಾಗಿದೆ. ಇತಿಹಾಸವನ್ನು ನೋಡುವ ಈ ದೃಷ್ಟಿಕೋನದಲ್ಲಿ ಭಗವಂತನ ಪ್ರೇರಣೆಯೇ ಪ್ರಮುಖವಾಗಿ ಮತೀಯ ನಂಬಿಕೆಗಳೇ ಆಧಾರವಾದುವು. ಅದೃಷ್ಟವಾದವೂ (ಫೇಟಲಿಸಂ) ಇಂಥ ಭಾವನೆಗಳಿಂದ ಬೆಳೆಯಿತು. ಅದೃಷ್ಟವಾದದ ಪ್ರಕಾರ ಮಾನವ ದೈವಶಕ್ತಿಗೆ ತಲೆಬಾಗಿ, ತನ್ನ ಪಾಲಿಗೆ ಬಂದ ಬಡತನವೊ, ಸಿರಿತನವೊ, ಜ್ಞಾನವೊ, ಅಜ್ಞಾನವೊ, ಆರೋಗ್ಯವೊ, ಅನಾರೋಗ್ಯವೊ, ದೈವದತ್ತವಾದದ್ದೆಂದು ನಂಬಿ, ಅವುಗಳು ತನ್ನ ಕಾರ್ಯಗಳಿಂದಾಗಿಲ್ಲವೆಂದು ತಿಳಿದು ಜೀವಿಸಬೇಕೆಂಬುದೇ ಆಗಿದೆ. ಇತಿಹಾಸದ ಘಟನೆಗಳ ಹಿಂದೆ ಯಾವುದೋ ಶಕ್ತಿಯ ಕೈವಾಡವಿದೆ ಎಂದು ಟೋಕವಿಲ್ ಹೇಳುತ್ತಾನೆ. ಪ್ರಜಾಪ್ರಭುತ್ವದ ವಿಕಾಸ ಪರಮಾತ್ಮನ ಇಚ್ಛೆಯಿಂದಾದ್ದು ಎಂದು ಅಭಿಪ್ರಾಯ ಪಡುತ್ತಾನೆ. ಆದರೆ ಪ್ರೂಧಾನಂಥ ತತ್ತ್ವಜ್ಞಾನಿಗಳು ಈ ರೀತಿಯ ವಾದ ಮನುಷ್ಯರಲ್ಲಿರುವ ಕ್ರಿಯಾತ್ಮಕ ಶಕ್ತಿಯನ್ನು ಅಲ್ಲಗಳೆಯುತ್ತದೆಂದು ಭಾವಿಸುತ್ತಾರೆ. ವಿಜ್ಞಾನದ ಪ್ರಗತಿ ಸಮಾಜ ವಿಕಾಸ ಇವೆಲ್ಲ ದೇವರಿಲ್ಲದೆ ನಡೆಯುತ್ತದೆ; ಮನುಷ್ಯನಲ್ಲಿ ಅಡಗಿರುವ ಸುಪ್ತಶಕ್ತಿಯಿಂದ ಅವನು ಸೃಷ್ಟಿಯ ಯಜಮಾನನಾಗಲು ಸಾಧ್ಯ ಮತ್ತು ಇದರಿಂದ ದೇವರ ಸರಿಸಮಾನ ಅಂತಸ್ಥಿಗೇರಲು ಸಾಧ್ಯ ಎಂಬುದಾಗಿ ಪ್ರೂಧಾ ಭಾವಿಸುತ್ತಾನೆ. 

	ಎರಡನೆಯ ಹೇಳಿಕೆ ಅವಶ್ಯಕತೆ ಮತ್ತು ಅದರ ಪಾತ್ರಕ್ಕೆ ಸಂಬಂಧಿಸಿದ್ದೇ ಆಗಿದೆ. ಇದೂ ವಿಜ್ಞಾನದ ಕ್ಷೇತ್ರಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಸಂಘಸಂಸ್ಥೆಗಳಿಗೆ ಸಂಬಂಧಪಟ್ಟ ಈ ಅಂಶಗಳು ಮನುಷ್ಯ ಸಮಾಜವನ್ನು ರೂಪಿಸಿಕೊಳ್ಳುವುದಕ್ಕೆ ಸಹಾಯಕವಾಗಿವೆ. ಅವಶ್ಯಕತೆಗಳೆಂದರೆ ಅನೇಕ ವಸ್ತುಗಳ ನಡುವೆ ಇರುವ ಪರಸ್ಪರ ಸಂಬಂಧ. ಇವು ಪ್ರಕೃತಿದತ್ತವಾಗಿ ಬಂದವು. ಸಂಘ ಸಂಸ್ಥೆಗಳು ಇತಿಹಾಸದಲ್ಲಿ ಬಹು ಮುಖ್ಯ. ಅವು ಸಾಮಾಜಿಕ ಸಂಬಂಧಗಳನ್ನು ನಿಯಮಬದ್ಧವಾಗಿ ಅಭ್ಯಾಸ ಮಾಡಲು ಸಹಾಯ ಮಾಡುತ್ತವೆ. ಈ ವಿಷಯಗಳನ್ನು ತಳಹದಿಯನ್ನಾಗಿಟ್ಟುಕೊಂಡು ಫ್ರೆಂಚ್ ತತ್ತ್ವಜ್ಞಾನಿ ಆಗಸ್ಟ ಕಾಂಟ್ ಒಂದು ಇತಿಹಾಸದ ದರ್ಶನವನ್ನು ನಮ್ಮ ಮುಂದೆ ಇಟ್ಟಿದ್ದಾನೆ. ಅಂಥ ದರ್ಶನವನ್ನು ದೃಷ್ಟಪ್ರಮಾಣವಾದ (ಪಾಸಿಟಿವಿಸಮ್) ಎಂದು ಕರೆಯುತ್ತಾರೆ. ಕಾಂಟ್ ಇತಿಹಾಸವನ್ನು ಸಾಮಾಜಿಕ ಭೌತಶಾಸ್ತ್ರ (ಸೋಷಿಯಲ್ ಫಿಸಿಕ್ಸ್) ಎಂದು ಕರೆಯುತ್ತಾನೆ. ಘಟನೆಗಳು ಒಂದು ಕ್ರಮಬದ್ಧವಾದ, ಬೌದ್ಧಿಕವಾದ ರಚನೆಗೆ ಒಳಪಟ್ಟಿರುವುದರಿಂದ ಮಾನವನ ಆಲೋಚನೆಗಳನ್ನು ಗುರುತಿಸಲು ಸಾಧ್ಯ. ಈ ರೀತಿಯಾಗಿ ಮಾಡಿದಲ್ಲಿ ನಮಗೆ ಒಂದು ದೇಶದ ವಿವಿಧ ಕಾಲಗಳಲ್ಲಿದ್ದ ಆಲೋಚನಾ ಪರಂಪರೆಯ ಪಥವೇ ಸಿಕ್ಕಂತಾಗುತ್ತದೆ. ಬೀಜಗಣಿತದ ಸೂತ್ರದಿಂದ ಒಂದು ವಕ್ರರೇಖೆಯನ್ನು ಗುರುತಿಸುವಂತೆ, ಮಾನವನ ಇತಿಹಾಸದ ಹಿಂದೆ ಅಡಕವಾಗಿರುವ ನಿಯಮಗಳನ್ನು. ಅವು ಹೇಗೆ ಅವನ ಕಾರ್ಯಚಟುವಟಿಕೆಗಳ ಮೇಲೆ ಪ್ರಭಾವ ಬೀರಬಲ್ಲವೆಂಬ ಅಂಶವನ್ನು ಪತ್ತೆಹಚ್ಚಬಹುದು ಎಂದು ದೃಷ್ಟಪ್ರಮಾಣವಾದಿಗಳು ಅಭಿಪ್ರಾಯಪಟ್ಟರು. ಒಂದೊಂದೇ ಘಟನೆಗಳನ್ನು ಅಭ್ಯಾಸಮಾಡದೆ, ಒಟ್ಟು ಸಾಮಾನ್ಯವಾದ ಸರಾಸರಿ ಗುಣಾವಗುಣಗಳನ್ನು ತೆಗೆದುಕೊಂಡು, ಒಟ್ಟು ಸಮಾಜ ಮತ್ತು ಆಯಾಕಾಲದ ಪರಿಸ್ಧಿತಿಯನ್ನೇ ಪ್ರಧಾನವಾಗಿಟ್ಟುಕೊಂಡು ಅಭ್ಯಾಸ ಮಾಡಿದಲ್ಲಿ ನಾವು ಘಟನೆಗಳ ಹಿಂದಿರುವ ಸಾಮಾನ್ಯ ನಿಯಮಗಳನ್ನು ಗುರುತಿಸಲು ಸಾಧ್ಯ ಎಂಬುದಾಗಿ ದೃಷ್ಟಪ್ರಮಾಣವಾದಿಗಳು ಅಭಿಪ್ರಾಯಪಟ್ಟರು. ಇತಿಹಾಸವನ್ನು ವಿಜ್ಞಾನದ ಮಟ್ಟಕ್ಕೆ ತೆಗೆದುಕೊಂಡುಹೋಗುವ ಈ ಪ್ರಯತ್ನ ಯಶಸ್ವಿಯಾಗಲಿಲ್ಲ. ಏಕೆಂದರೆ ವಿಜ್ಞಾನದ ಮುಖ್ಯ ವೈಶಿಷ್ಟ್ಯವಾದ ಭವಿಷ್ಯವನ್ನು ನುಡಿಯುವ ಅಥವಾ ತೋರಿಸುವ ಗುಣ ಇತಿಹಾಸಕ್ಕೆ ಇಲ್ಲದಿದ್ದುದೇ ಅಂಥ ಪ್ರಯತ್ನ ವಿಫಲವಾಗಲು ಕಾರಣವಾಯಿತು. ನಾಳೆ ಸಂಭವಿಸುವ ಘಟನೆಗಳನ್ನು ನಮ್ಮ ಈ ದಿನದ ಜ್ಞಾನದ ತಳಹದಿಯ ಮೇಲೆ ಖಚಿತವಾಗಿ ಹೇಳಲು ಇತಿಹಾಸಕ್ಕೆ ಸಾಧ್ಯವಿಲ್ಲ.

	ಇತಿಹಾಸ ದರ್ಶನದ ಮೂರನೆಯ ಅಂಶವೆಂದರೆ ತರ್ಕ. ತರ್ಕ ಖಚಿತವಾದ ಯೋಚನೆಗೆ ಮತ್ತು ನಿಯಮಕ್ಕೆ ಪ್ರಾಧಾನ್ಯ ಕೊಡುತ್ತದೆ. ಸಮಾಜಗಳ ವ್ಯವಸ್ಧೆಯ ಬೇರು ವ್ಯಕ್ತಿಗಳು, ಗುಂಪಿನ ಭಾವನೆಗಳಲ್ಲಿದೆ. ಈ ಭಾವನೆಗಳು ಆಯಾ ಸಮಾಜದ ಇತಿಹಾಸದಲ್ಲಿ ಸತತವಾಗಿ ಹೊಂದಿಕೊಂಡು ನಡೆದುಬರುತ್ತಿವೆ. ಈ ಭಾವನೆಗಳ ಆಧಾರದ ಮೇಲೆ ಹ್ಯೂಮ್, ಹೆಗೆಲ್, ರಾಂಕ ಮತ್ತು ಮತ್ತಿತರರು ತಮ್ಮ ಸಿದ್ಧಾಂತಗಳನ್ನು ಮಂಡಿಸಿದ್ದಾರೆ. ಹೆಗೆಲನ ಅನುಯಾಯಿಗಳಾದ ರಾಂಕ, ಮಾಮ್‍ಸೇನ್, ಕೌಜಿನ್, ಟೇನೆ, ದ್ರೈಸೆನ್ ಮತ್ತು ಮಿಷಿಲೆ ಅವರುಗಳು ಇತಿಹಾಸದ ಘಟನೆಗಳು ಬೌದ್ಧಿಕವಾಗಿದ್ದು ಒಂದು ಕ್ರಮಬದ್ಧವಾದ ಸಮಗ್ರವಾದ ಯೋಜನೆಗೆ ಸಂಬಂಧಿಸಿರುತ್ತವೆಯೆಂಬುದನ್ನು ನಂಬಿದ್ದರು. ಇತಿಹಾಸದ ಅಧ್ಯಯನಕ್ಕೆ ಮಾನವೀಯತೆಯ ಮೆರಗು ಕೊಟ್ಟು ಅದನ್ನು ಸಹಜವಾದ ಭಾವನೆಗಳ ಕೇಂದ್ರವಾಗಿ ಉಳ್ಳ ಶಾಸ್ತ್ರವನ್ನಾಗಿ ಮಾಡಿದ ಕೀರ್ತಿ ಈ ತತ್ತ್ವಜ್ಞಾನಿಗಳಿಗೆ ಸಲ್ಲಬೇಕು.

	ಹತ್ತೊಂಬತ್ತನೆಯ ಶತಮಾನದಲ್ಲಿ ಕಾರ್ಲ್‍ಮಾಕ್ರ್ಸ್‍ನ ಭೌತ ಸಿದ್ಧಾಂತದ ಆಧಾರದ ಮೇಲೆ ಇತಿಹಾಸವನ್ನು ಅಧ್ಯಯನ ಮಾಡಿ, ಆರ್ಥಿಕ ಕಾರಣಗಳೇ ಸಮಾಜ ರಚನೆಗೆ, ಏಳಿಗೆಗೆ ಮತ್ತು ಅವನತಿಗಳಿಗೆ ಕಾರಣವೆಂಬ ಅಭಿಪ್ರಾಯವನ್ನು ಪ್ರಚಾರಗೊಳಿಸಿದ. ಅವನ ಪ್ರಕಾರ ಸಮಾಜದಲ್ಲಿರುವ ಪರಸ್ಪರ ಸಂಬಂಧಗಳು ಸಂಪತ್ತನ್ನು ಉತ್ಪನ್ನ ಮಾಡತಕ್ಕ ಸಾಧನಗಳನ್ನೇ ಅವಲಂಬಿಸಿವೆ. ಹೆಗೆಲ್‍ಗೆ ಪ್ರಪಂಚ ಆತ್ಮದ ಪ್ರತಿಬಿಂಬವಾದರೆ ಮಾಕ್ರ್ಸ್‍ನಿಗೆ ಅದು ಲೌಕಿಕ ವ್ಯವಹಾರದ ಪ್ರತಿಬಿಂಬವಾಯಿತು. ಮಾಕ್ರ್ಸ್ ಸಮಗ್ರ ಇತಿಹಾಸವನ್ನು ವಿವಿಧ ಪಂಗಡಗಳ, ಗುಂಪುಗಳ ಘರ್ಷಣೆ ಎಂದು ಕರೆದ.

	ಇಪ್ಪತ್ತನೆಯ ಶತಮಾನ : ಇಪ್ಪತ್ತನೆಯ ಶತಮಾನದಲ್ಲಿ ಟಾಯನ್‍ಬಿ ಮತ್ತು ಸ್ಪೆಂಗ್ಲರ್ ತಮ್ಮವೇ ಆದ ಇತಿಹಾಸ ದರ್ಶನಗಳನ್ನು ಮಂಡಿಸಿದ್ದಾರೆ. ಜರ್ಮನಿಯ ಸ್ಪೆಂಗ್ಲರ್ ತನ್ನ ಶ್ರೇಷ್ಠ ಗ್ರಂಥವಾದ ಡಿಕ್ಲೈನ್ ಆಫ್ ದಿ ವೆಸ್ಟ್ ಎಂಬುದರಲ್ಲಿ ಸತ್ಯ ಅಥವಾ ಬ್ರಹ್ಮಶಕ್ತಿಯಲ್ಲಿ (ಕಾಸ್ಮಿಕ್ ಎನರ್ಜಿ) ಪ್ರಾಕೃತಿಕ ಪ್ರಪಂಚ (ವರ್ಲ್ಡ್ ಆಫ್ ನೇಚರ್) ಮತ್ತು ಇತಿಹಾಸ ಪ್ರಪಂಚ ಎಂಬ ಎರಡು ಭಾವನೆಗಳು ಅಡಕವಾಗಿವೆಯೆಂದು ಅಭಿಪ್ರಾಯಪಟ್ಟ. ಪ್ರಪಂಚರಚನೆಯನ್ನು ಸ್ವಲ್ಪವೂ ಭಂಗಪಡಿಸದೆ ಅದನ್ನು ಅರಿತುಕೊಳ್ಳುವ ಮಾನವ ಪ್ರಯತ್ನವೇ ಇತಿಹಾಸ ಎಂದು ಕರೆಯಬಹುದು. ಒಂದು ಗಿಡ, ಒಂದು ಹುಳು, ಒಂದು ತಾರೆ, ಒಂದು ತುಂಡು ಹುಲ್ಲು, ಒಂದು ಹೂವು, ಒಂದು ಹನಿ ನೀರು-ಇವೆಲ್ಲ ನೀರಿನ ಅಂಶವೇ ಆಗಿ ಪ್ರಕೃತಿಯಲ್ಲಿ ಕೂಡಿಕೊಂಡಿವೆ. ಮಾನವ ಅವು ಏನು ಎಂಬುದನ್ನು ಅರಿತುಕೊಳ್ಳಬಲ್ಲನೇ ವಿನಾ ಅವುಗಳನ್ನೇ ಸೃಷ್ಟಿಸಲು ಸಾಧ್ಯವಿಲ್ಲ. ಈ ರೀತಿಯ ತಿಳಿವಳಿಕೆ ಸಾಮಾನ್ಯ ಮನುಷ್ಯನಿಗೆ ಸಾಧ್ಯವೆಂದು ಹೇಳಲಾಗುವುದಿಲ್ಲ. ಉನ್ನತಮಟ್ಟದ ಸಂಸ್ಕøತಿಯುಳ್ಳ ಮಾನವನಿಗೆ ಮಾತ್ರ ಈ ಜ್ಞಾನ ಲಭ್ಯವಾದೀತು. ಅವನು ಈ ಕ್ಷೇತ್ರದಲ್ಲಿ ಪಂಡಿತನಾಗಿರಬೇಕು. ಹಾಗಿದ್ದಲ್ಲಿ ಮಾತ್ರ ಆತ ಜೀವನ ವೈಚಿತ್ರ್ಯಗಳ ಮೇಲೆ ಸಾಕಷ್ಟು ಬೆಳಕು ಬೀರಲು ಸಾಧ್ಯ. ಆದರೆ ಇತಿಹಾಸ ಮಾನವ ನಿರ್ಮಿತವಾದದ್ದು, ಇತಿಹಾಸ ಅವನ ಸೃಷ್ಟಿಯ ಪ್ರತಿಬಿಂಬ. ತನ್ನ ಸುತ್ತಲಿನ ಪ್ರಪಂಚವನ್ನು ಅರಿತುಕೊಳ್ಳಲು ಆತ ಇಂಥ ಪ್ರತಿಬಿಂಬವನ್ನು ಸೃಷ್ಟಿಸುತ್ತಾನೆ. ಮಾನವ ಹರಿಯುತ್ತಿರುವ ನದಿಯ ನೀರನ್ನು ಕಟ್ಟೆ ಕಟ್ಟಿ ಕಾಲುವೆಯ ಮುಖಾಂತರ ವ್ಯವಸಾಯಕ್ಕೆ ಉಪಯೋಗಿಸುತ್ತಾನೆ. ಮಾನವರು ಸಮಾಜ ರಚಿಸಿ ಒಂದಾಗಿ ಬಾಳಿ ತಮ್ಮ ತಮ್ಮ ಕುಟುಂಬ ರಕ್ಷಣೆ ಮಾಡುತ್ತಿದ್ದಾರೆ. ಹಾಗೆಯೇ ಅಭಿವೃದ್ಧಿಗೋಸ್ಕರ, ನಗರ, ರಾಜ್ಯ, ಮತ್ತು ರಾಷ್ಟ್ರಗಳನ್ನು ಕಟ್ಟುತ್ತಿದ್ದಾರೆ. ಈ ಎಲ್ಲ ಚಟುವಟಿಕೆಗಳೂ ಇತಿಹಾಸವೇ. ರಾಜಕೀಯದಲ್ಲಿ, ಯುದ್ಧದಲ್ಲಿ, ಶಾಂತಿಯಲ್ಲಿ, ಕಲೆ ವಿದ್ಯಾಭ್ಯಾಸಗಳ ಕ್ಷೇತ್ರಗಳಲ್ಲಿ ಮಾನವ ಹೊಸ ಹೊಸದಾಗಿ, ಆ ಮೊದಲು ಇಲ್ಲದೇ ಇದ್ದದ್ದನ್ನು ಸೃಷ್ಟಿಸುತ್ತ ಇರುತ್ತಾನೆ. ಇವೆಲ್ಲವೂ ಇತಿಹಾಸದ ಭಾಗವೇ ಆಗಿದೆ. ಶಿಲಾಯುಗದಿಂದ ಅಣುಯುಗದವರೆಗೆ ಮಾನವ ಪ್ರಕೃತಿಯನ್ನು ಗೆಲ್ಲುವ ತನ್ನ ಶಕ್ತಿಯಲ್ಲಿ ಅಭಿವೃದ್ಧಿಯನ್ನು ತೋರಿಸಿದ್ದಾನೆ. ಇದೂ ಇತಿಹಾಸದ ಒಂದು ಭಾಗವೇ ಆಗಿದೆ. ಸಂಗ್ರಹವಾಗಿ ಹೇಳುವುದಾದರೆ, ಅದು ಏನು ಎಂದು ತಿಳಿಯಲು ಪ್ರಕೃತಿಯನ್ನು ಕುರಿತು ಮಾನವ ನಡೆಸುವ ಅಭ್ಯಾಸ ವಿಜ್ಞಾನ; ಪ್ರಕೃತಿಯನ್ನು ತನ್ನ ಹತೋಟಿಗೆ ತಂದುಕೊಳ್ಳುವ ಪ್ರಯತ್ನದಲ್ಲಿ ಹೊಸ ಹೊಸದಾಗಿ ಏನನ್ನು ಸೃಷ್ಟಿಸುತ್ತಾನೋ ಅದೇ ಇತಿಹಾಸ; ದೇವರು ಸೃಷ್ಟಿಸಿದ್ದು ಪ್ರಕೃತಿ, ಮಾನವ ನಿರ್ಮಿಸಿದ್ದು ಇತಿಹಾಸ.

	ಪ್ರಕೃತಿಗೂ ಇತಿಹಾಸಕ್ಕೂ ಇನ್ನೂ ಬೇರೆ ಬೇರೆ ವ್ಯತ್ಯಾಸಗಳಿವೆ. ಇತಿಹಾಸ ಮಾರ್ಪಾಡು ಹೊಂದುತ್ತಿರುವ, ಜೀವಂತವಿರುವ ಒಂದು ಶಕ್ತಿ. ಆದರೆ ಪ್ರಕೃತಿ ಆಗಲೇ ಮಾರ್ಪಾಟು ಹೊಂದಿ, ತನ್ನದೇ ಆದ ಗುರಿಯಿಲ್ಲದ, ಕಾಲಮಾನಗಳ ಹತೋಟಿಗೆ ಒಳಪಡದೆ ಇರುವ ಒಂದು ಸಿದ್ಧವಸ್ತು ಎನ್ನಬಹುದು. ಇತಿಹಾಸ ಪದೇ ಪದೇ ಬದಲಾಗುತ್ತಿರುವ ಬೆಳೆಯುತ್ತಲೇ ಇರುವ, ಯಾವಾಗಲೂ ಭೂತದಿಂದ ವರ್ತಮಾನಕ್ಕೆ, ವರ್ತಮಾನದಿಂದ ಭವಿಷ್ಯಕ್ಕೆ ಸಾಗಿಹೋಗುತ್ತಿರುವ ಒಂದು ಶಕ್ತಿ. ಆದರೆ ಪ್ರಕೃತಿಯಾದರೋ ನಿನ್ನೆಗೂ ಇಂದಿಗೂ ಮತ್ತು ನಾಳೆಗೂ ಒಂದೇ ರೀತಿಯಿಂದಿರುವ ಒಂದು ಶಕ್ತಿ.

	ಸ್ಪೆಂಗ್ಲರ್‍ನ ಮತ್ತೊಂದು ಭಾವನೆ ಸಂಸ್ಕøತಿಯ ಅಧ್ಯಯನಕ್ಕೆ ಸಂಬಂಧಿಸಿದ್ದಾಗಿದೆ. ಈತನ ಪ್ರಕಾರ ಸಂಸ್ಕøತಿಗಳು ಜೀವಂತವಸ್ತುಗಳು; ಪ್ರಪಂಚದ ಇತಿಹಾಸವೆಂದರೆ ಅವುಗಳ ಒಟ್ಟು ಜೀವನಚರಿತ್ರೆ. ಸಂಸ್ಕøತಿಗಳಿಗೂ ಹುಟ್ಟು ಬೆಳೆವಣಿಗೆ ಸಾವುಗಳು ಇವೆ; ಕೌಮಾರ್ಯ, ಯೌವನ, ಮುಪ್ಪು, ಮತ್ತು ಸಾವು ಎಂಬ ಚಕ್ರದಲ್ಲಿ ಅವು ಸುತ್ತುತ್ತ ಇರುತ್ತವೆ. ಕೌಮಾರ್ಯದಲ್ಲಿ ಒಂದು ಸಂಸ್ಕøತಿ ಬೆಳೆಯುತ್ತಿರುವ ಆತ್ಮವನ್ನೂ ತೇಜಸ್ಸನ್ನೂ ಹೊಂದಿರುತ್ತದೆ. ಆದರೆ ಯೌವನದಲ್ಲಿ ಅದು ಮಾಗಿದ. ಪಕ್ವವಾದ, ಸುಂದರವಾದ, ಅಚ್ಚುಕಟ್ಟಾದ ಶಕ್ತಿ ಸಂಗ್ರಹಮಾಡುತ್ತದೆ. ಸಂಸ್ಕøತಿಯ ಮುಪ್ಪು ಎಂದರೆ ಅದರ ನಾಗರಿಕತೆಯೇ ಎಂದು ಹೇಳಬಹುದು. ವೈವಿಧ್ಯ, ವೈಜ್ಞಾನಿಕ ರೀತಿಯ ಮತೀಯ ನಡೆವಳಿಕೆ ಮತ್ತು ನಂಬಿಕೆಗಳು. ಅಂಕಿ ಅಂಶಗಳ ಪ್ರಾಧ್ಯಾನ್ಯ, ಸ್ಧಾನಮಾನಗಳಿಗೋಸ್ಕರ ದಾಹ, ಬಹುಶ್ರುತ ಮೌಲ್ಯಗಳು ಮತ್ತು ವಸಾಹತುನೀತಿಯ ಧೋರಣೆ ಇವೆಲ್ಲ ಅಳಿದು ಹೋಗುತ್ತಿರುವ, ನಾಗರೀಕತೆಯ ಘಟ್ಟದ ಸಂಸ್ಕøತಿಯ (ಸಿವಿಲಿಸೇಷನ್ ಫೇಸ್ ಆಫ್ ಕಲ್ಚರ್) ಗುರುತುಗಳಾಗಿವೆ. ಸಂಸ್ಕøತಿಯ ಘಟ್ಟದಲ್ಲಿ ಎಲ್ಲ ರೀತಿಯ ಹೋರಾಟಗಳೂ (ರಕ್ತಪಾತಗಳೂ ಸೇರಿದಂತೆ) ಒಂದು ಭಾವನೆಗೆ, ಆದರ್ಶಕ್ಕೆ ಮಾತ್ರ ನಡೆಸುವ ಹೋರಾಟಗಳಾಗುತ್ತವೆ. ಆದರೆ ನಾಗರಿಕತೆಯ ಘಟ್ಟದಲ್ಲಿ ಅಂಥ ಹೋರಾಟಗಳು ಸ್ವಾರ್ಥ ಸಾಧನೆಗಳಿಗಾಗಿ ನಡೆಸುವ ಹೋರಾಟಗಳಾಗುತ್ತವೆ ಎಂದು ಸ್ಲೆಂಗ್ಲರ್ ಅಭಿಪ್ರಾಯ ಪಡುತ್ತಾನೆ.

	ಇಂದಿನ ವಿಶ್ವದ ಹೆಸರಾಂತ ಇತಿಹಾಸಕಾರರಾದ ಟಾಯ್ನ್‍ಬಿಯವರು ತಮ್ಮ ಇತಿಹಾಸ ದರ್ಶನದ ಮೂಲಕ. ಒಂದು ಸಂಸ್ಕøತಿಯ ಹುಟ್ಟು ಬೆಳೆವಣಿಗೆ ಮತ್ತು ನಾಶದ ಬಗ್ಗೆ ಅಭ್ಯಾಸ ನಡೆಸಿದ್ದಾರೆ. ಅವರ ಸಿದ್ಧಾಂತವನ್ನು ಸವಾಲು ಮತ್ತು ಜವಾಬು (ಚಾಲೆಂಚ್ ಮತ್ತು ರೆಸ್ಟಾನ್ಸ್) ಎಂದು ಕರೆಯುತ್ತಾರೆ. ಅವರ ಪ್ರಕಾರ ವಿವಿಧ ಸಮಾಜಗಳೇ ಇತಿಹಾಸದ ಮೂಲವಸ್ತುಗಳು. ಸಂಸ್ಕøತಿಗಳೇ ಇತಿಹಾಸದ ಪ್ರಮುಖ ಅಧ್ಯಯನದ ವಿಷಯ. ಒಂದು ಸಂಸ್ಕøತಿ ಹುಟ್ಟಬೇಕಾದರೆ ಒಂದು ವರ್ಣವೇ ಆಗಲಿ, ಒಂದು ಜನಾಂಗವೇ ಆಗಲಿ ಅಥವಾ ಒಂದು ವಿಶಿಷ್ಟ ವಾತಾವರಣವೇ ಆಗಲಿ ಪ್ರಮುಖವಲ್ಲ. ಸಂಸ್ಕøತಿಯ ಬೆಳೆವಣಿಗೆಗೆ ಎರಡು ಪ್ರಮುಖ ಅಂಶಗಳೆಂದರೆ : 1 ಹೆಚ್ಚಿನ ಅನುಕೂಲವೂ ಇಲ್ಲದ. ಅನಾನುಕೂಲವೂ ಇಲ್ಲದ ವಾತಾವರಣ: 2 ರಚನಾತ್ಮಕ ದೃಷ್ಟಿಯುಳ್ಳ ಒಂದು ಪಂಗಡ. ಆ ಸಮಾಜದಲ್ಲಿ ಮಾನವನ ಮಿದುಳಿನಂತೆ. ಈ ಪಂಗಡ ಸಮಾಜದ ಎಲ್ಲ ಚಟುವಟಿಕೆಗಳನ್ನೂ ನಿಯಂತ್ರಿಸುವ ಮತ್ತು ಹಿಡಿತದಲ್ಲಿಟ್ಟಿರುವ ಕೆಲಸ ಮಾಡುತ್ತದೆ. ಯಾವಾಗ ಈ ಎರಡು ಮೂಲಭೂತ ಅಂಶಗಳು ಇರುತ್ತವೆಯೋ ಆಗ ಸವಾಲು-ಜವಾಬುಗಳ ಘರ್ಷಣೆಯಿಂದಾಗುವ ಕ್ರಿಯೆ ಪ್ರಾರಂಭವಾಗುತ್ತದೆ. ಸುತ್ತಲಿನ ವಾತಾವರಣ ಸಮಾಜಕ್ಕೆ ಸವಾಲನ್ನಿತ್ತಾಗ. ಆ ಸವಾಲುಗಳಿಗೆ ಸಮಾಜದ ಕ್ರಿಯಾತ್ಮಕ ಪಂಗಡ ಸಫಲವಾಗಿ ಉತ್ತರಗಳನ್ನೀಯುತ್ತದೆ. ಈ ರೀತಿಯ ಕ್ರಿಯೆ-ಪ್ರತಿಕ್ರಿಯೆಗಳಿಂದ ಸಮಾಜದ ಅವಶ್ಯಕತೆಗಳು ಪೂರೈಸುತ್ತವೆ ಮತ್ತು ಹೊಸ ಹೊಸ ಸವಾಲುಗಳು ಹುಟ್ಟುತ್ತವೆ. ಇದಕ್ಕೆ ಕೊನೆ ಮೊದಲೇ ಇಲ್ಲವೆನ್ನಬಹುದು. ಇಂಥ ಕ್ರಿಯೆ ಒಂದು ಸಮಾಜ ನಾಗರಿಕತೆಯ ಘಟ್ಟವನ್ನು ಮುಟ್ಟುವವರೆಗೂ ನಡೆಯುತ್ತಲೇ ಇರುತ್ತದೆ. ಉನ್ನತವಾದ ಮತ್ತು ಸಮಗ್ರವಾದ ಅಂತರಾತ್ಮ ನಿರ್ದೇಶತ್ವದಿಂದ ಒಂದು ನಾಗರಿಕತೆಯ ಅಭಿವೃದ್ದಿ ಉಂಟಾಗುತ್ತದೆ. ಅಂದರೆ ಅಭಿವೃದ್ಧಿಯೆಂಬುದು ಸಮಾಜದ ಹೊರಗಡೆಯ ಕೃತಿಯಿಂದ ಆಗದೆ, ಸಮಾಜದ ಆಂತರಿಕ ಶಕ್ತಿಯಿಂದಾಗುತ್ತದೆ. ಭೌಗೋಳಿಕ ಹರಡುವಿಕೆಯಿಂದಾಗಲಿ, ಅಥವಾ ವೈಜ್ಞಾನಿಕ ಮತ್ತು ತಾಂತ್ರಿಕ ಅಭಿವೃದ್ಧಿಯಿಂದಾಗಲಿ ಒಂದು ಸಂಸ್ಕøತಿ ಬೆಳೆಯಲು ಸಾಧ್ಯವಿಲ್ಲ. ಮಾನವನಲ್ಲಿರುವ ಆಂತರಿಕ ಶಕ್ತಿ ಮತ್ತು ನಿಜವಾದ ಯೋಗ್ಯತೆಗಳಿಂದ ಮಾತ್ರ ಸಂಸ್ಕøತಿಯ ಅಭಿವೃದ್ಧಿ ಆದೀತು. ಕ್ರಿಯಾತ್ಮಕ ಅಲ್ಪ ಸಂಖ್ಯಾತ ಪಂಗಡವೂ ಸಫಲವಾದ ಉತ್ತರಗಳನ್ನು ಸವಾಲುಗಳಿಗೆ ಕೊಡಲು ನಿಲ್ಲಿಸಿದಾಗ ನಾಗರಿಕತೆ ಅವನತಿಯ ಹಾದಿ ಹಿಡಿಯುತ್ತದೆ. ಆದ್ದರಿಂದ ನಾಗರಿಕತೆಗಳು ಆತ್ಮಹತ್ಯದಿಂದ ನಾಶವಾಗುವುವೇ ಹೊರತು ಅವುಗಳನ್ನು ಯಾರೂ ನಾಶ ಮಾಡಲು ಸಾಧ್ಯವಿಲ್ಲ. ಸಮಾಜಕ್ಕೆ ತಲೆದೋರಿದ ಸವಾಲುಗಳಿಗೆ ಕ್ರಿಯಾತ್ಮಕ ಪಂಗಡ ಸರಿಯಾದ ಉತ್ತರವನ್ನು ನೀಡದೆ ಇದ್ದಾಗ ಅಂಥ ಸಮಾಜದಲ್ಲಿ ಒಡಕುಂಟಾದೀತು. (ನೋಡಿ- ಟಾಯ್ನ್‍ಬಿ,-ಅರ್ನಾಲ್ಡ್-ಜೋಸೆಫ್)

	ಒಟ್ಟಿನಲ್ಲಿ ಹೇಳುವುದಾದರೆ ಇತಿಹಾಸ ದರ್ಶನವೂ ಅನೇಕ ಟೀಕೆಗಳನ್ನು ಒಂದು ಗೂಡಿಸಲು ಪ್ರಯತ್ನಸುತ್ತದೆ. ಇಂಥ ಟೀಕೆಗಳು ಒಂದು ತತ್ತ್ವಕ್ಕೂ ಒಂದು ಸಾಮಾನ್ಯ ನಿಯಮಕ್ಕೂ ಒಳಪಟ್ಟಿರುತ್ತವೆ. ಇದೇ ಇತಿಹಾಸ ದರ್ಶನದ ಉದ್ದೇಶ. ಇತಿಹಾಸ ದರ್ಶನ ಘಟನೆಗಳನ್ನು ತರ್ಕಬದ್ಧವಾದ ರೀತಿಯಲ್ಲಿ ಅರಿಯಲು ಪ್ರಯತ್ನಿಸುತ್ತದೆ. ಇಂಥ ಅರಿವುಗಳು ಅನೇಕ ತಾತ್ತ್ವಿಕ ಪಂಗಡಗಳಾದ ಆದರ್ಶವಾದಿಗಳು (ಐಡಿಯಲಿಸ್ಟ್ಸ್), ರಮ್ಯತಾವಾದಿಗಳು (ರೊಮಾಂಟಿಸಿಸ್ಟ್ಸ್) ದೃಷ್ಟಪ್ರಮಾಣ ವಾದಿಗಳು (ಪಾಸಿಟಿವಿಸ್ಟ್ಸ), ಭೌತವಾದಿಗಳು (ಮೆಟೀರಿಯಲಿಸ್ಟ್ಸ), ಆಧುನಿಕರು (ಮಾಡರ್ನಿಸ್ಟ್ಸ) ಮೊದಲಾದವರಿಂದ ನಮಗೆ ಲಭ್ಯವಾಗಿವೆ. 

(ಬಿ.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ